ಭಾರತೀಯರ ಅಚ್ಚುಮೆಚ್ಚಿನ ಉಪಹಾರಗಳಲ್ಲಿ ಒಂದಾಗಿರುವ ಅವಲಕ್ಕಿ (ಪೋಹಾ) ಕೇವಲ ಬಾಯಿರುಚಿಗಷ್ಟೇ ಸೀಮಿತವಾಗಿಲ್ಲ. ರುಚಿಯ ಜೊತೆಗೆ ನಮ್ಮ ಆರೋಗ್ಯ ಕಾಪಾಡುವ ಅನೇಕ ಪೋಷಕಾಂಶಗಳನ್ನು ಇದು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ. ಪೌಷ್ಟಿಕಾಂಶ ತಜ್ಞರ ಪ್ರಕಾರ, ದಿನನಿತ್ಯದ ಆಹಾರ ಕ್ರಮದಲ್ಲಿ ಅವಲಕ್ಕಿಯನ್ನು ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಅದ್ಭುತವಾದ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.
ತೂಕ ನಿಯಂತ್ರಣಕ್ಕೆ ಅತ್ಯುತ್ತಮ ಆಹಾರ
ಅವಲಕ್ಕಿಯಲ್ಲಿ ಕ್ಯಾಲೋರಿ ಪ್ರಮಾಣ ಅತ್ಯಂತ ಕಡಿಮೆ ಇದ್ದು, ತಿಂದ ನಂತರ ಹೊಟ್ಟೆ ತುಂಬಿದ ಅನುಭವವನ್ನು ದೀರ್ಘಕಾಲದವರೆಗೆ ನೀಡುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು ಮತ್ತು ಅನಗತ್ಯ ಆಹಾರ ಸೇವನೆ ತಪ್ಪುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬೆಳಗಿನ ಉಪಹಾರವಾಗಿ ಇದೊಂದು ಹೇಳಿ ಮಾಡಿಸಿದ ಆಹಾರವಾಗಿದೆ.
ಮಧುಮೇಹಿಗಳಿಗೆ ವರದಾನ
ಸಾಮಾನ್ಯವಾಗಿ ಬಿಳಿ ಅನ್ನ ತಿಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹಠಾತ್ತಾಗಿ ಏರಿಕೆಯಾಗುತ್ತದೆ. ಆದರೆ, ಅವಲಕ್ಕಿಯಲ್ಲಿರುವ ನಾರಿನಂಶವು (ಫೈಬರ್) ಸಕ್ಕರೆ ಅಂಶವನ್ನು ನಿಧಾನವಾಗಿ ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಹೀಗಾಗಿ, ಮಧುಮೇಹ (ಡಯಾಬಿಟಿಸ್) ಇರುವವರಿಗೂ ಇದು ಅತ್ಯಂತ ಸುರಕ್ಷಿತ ಹಾಗೂ ಸೂಕ್ತವಾದ ಆಹಾರವಾಗಿದೆ.
ಸುಲಭ ಜೀರ್ಣಕ್ರಿಯೆ ಮತ್ತು ತ್ವರಿತ ಶಕ್ತಿ
ಇದು ಅತ್ಯಂತ ಹಗುರವಾದ ಆಹಾರವಾಗಿರುವುದರಿಂದ ಜೀರ್ಣಿಸಿಕೊಳ್ಳಲು ಸುಲಭ ಹಾಗೂ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿದೆ ಇರುವ ಆರೋಗ್ಯಕರ ಕಾರ್ಬೋಹೈಡ್ರೇಟ್ಗಳು ದೇಹಕ್ಕೆ ದಿಢೀರ್ ಶಕ್ತಿಯನ್ನು ಒದಗಿಸಿ ಲವಲವಿಕೆಯಿಂದಿರಲು ಸಹಾಯ ಮಾಡುತ್ತವೆ.
ರಕ್ತಹೀನತೆ ತಡೆಗಟ್ಟಲು ಸಹಕಾರಿ
ಅವಲಕ್ಕಿಯಲ್ಲಿ ಕಬ್ಬಿಣಾಂಶದ (ಐರನ್) ಪ್ರಮಾಣ ಅಧಿಕವಾಗಿರುತ್ತದೆ. ಅದರಲ್ಲೂ ಗರ್ಭಿಣಿಯರು ಹಾಗೂ ರಕ್ತಹೀನತೆ (ಅನಿಮಿಯಾ) ಸಮಸ್ಯೆಯಿಂದ ಬಳಲುತ್ತಿರುವವರು ಅವಲಕ್ಕಿ ಜೊತೆಗೆ ಸ್ವಲ್ಪ ನಿಂಬೆರಸ ಹಿಂಡಿ ತಿಂದರೆ, ನಿಂಬೆರಸದಲ್ಲಿನ ವಿಟಮಿನ್ ‘ಸಿ’ ಸಹಾಯದಿಂದ ದೇಹವು ಕಬ್ಬಿಣಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.
ಹೃದಯದ ಆರೋಗ್ಯಕ್ಕೆ ಪೂರಕ ಆರೋಗ್ಯಕರ ಕೊಬ್ಬಿನಂಶವನ್ನು ಹೊಂದಿರುವ ಅವಲಕ್ಕಿ, ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
ತಜ್ಞರ ಕಿವಿಮಾತುಅವಲಕ್ಕಿಗೆ ಕ್ಯಾರೆಟ್, ಬೀನ್ಸ್, ಬಟಾಣಿ ಮುಂತಾದ ತರಕಾರಿಗಳು ಹಾಗೂ ಸ್ವಲ್ಪ ಕಡಲೆಕಾಯಿಯನ್ನು ಸೇರಿಸಿ ತಿಂದರೆ ನಾರಿನಾಂಶ ಮತ್ತು ಪ್ರೋಟೀನ್ ದುಪ್ಪಟ್ಟಾಗುತ್ತದೆ. ಆರೋಗ್ಯಕರ ಮತ್ತು ಚೈತನ್ಯದಾಯಕ ದಿನದ ಆರಂಭಕ್ಕೆ ಅವಲಕ್ಕಿ ಖಂಡಿತವಾಗಿಯೂ ಬೆಸ್ಟ್ ಆಯ್ಕೆ!