ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ ಎಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಬರುವ ಕಾಯಿಲೆ ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ, ಈ ಆಲೋಚನೆ ಸಂಪೂರ್ಣ ಸುಳ್ಳು ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಪುರುಷರು ಕೂಡ ಸ್ತನ ಕ್ಯಾನ್ಸರ್ನಿಂದ ಮುಕ್ತರಲ್ಲ ಎನ್ನುವುದು ಹಲವರಿಗೆ ತಿಳಿದಿಲ್ಲ.
ಕೋಲ್ಕತ್ತಾದ ಖ್ಯಾತ ನಾರಾಯಣ ಆರ್.ಎನ್. ಟ್ಯಾಗೋರ್ ಆಸ್ಪತ್ರೆಯ ಸ್ತನ ಕ್ಯಾನ್ಸರ್ ತಜ್ಞೆ ಡಾ. ಪ್ರಗತಿ ಸಿಂಘಾಲ್ ಅವರ ಪ್ರಕಾರ, ಪುರುಷರ ದೇಹದಲ್ಲೂ ಸಹ ಅಲ್ಪ ಪ್ರಮಾಣದ ಸ್ತನ ಅಂಗಾಂಶಗಳು (Breast Tissues) ಇರುತ್ತವೆ. ಹಾರ್ಮೋನುಗಳಲ್ಲಿನ ವ್ಯತ್ಯಾಸ ಅಥವಾ ಇನ್ ಇತರೆ ಕಾರಣಗಳಿಂದ ಈ ಅಂಗಾಂಶಗಳಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಾಗಿ ಪುರುಷರಲ್ಲೂ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು? ಪುರುಷರು ತಮ್ಮ ಎದೆಯ ಭಾಗದಲ್ಲಿ ಉಂಟಾಗುವ ಸಣ್ಣಪುಟ್ಟ ಬದಲಾವಣೆಗಳನ್ನು ಕಡೆಗಣಿಸಬಾರದು.
-
ಎದೆಯ ಭಾಗದಲ್ಲಿ ಗಡ್ಡೆಗಳು ಕಂಡುಬರುವುದು.
-
ಮೊಲೆತೊಟ್ಟಿನಲ್ಲಿ (Nipple) ಅಸಾಮಾನ್ಯ ಬದಲಾವಣೆಗಳು ಅಥವಾ ಒಳಮುಖವಾಗಿ ತಿರುಗುವುದು.
-
ಮೊಲೆತೊಟ್ಟಿನ ಸುತ್ತಲಿನ ಚರ್ಮದಲ್ಲಿ ಕಿರಿಕಿರಿ, ಕೆಂಪಾಗುವುದು ಅಥವಾ ರ್ರ್ಯಾಷೆಸ್ ಉಂಟಾಗುವುದು. ಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.
ಅರಿವಿನ ಕೊರತೆ ಮತ್ತು ಮುಜುಗರವೇ ದೊಡ್ಡ ಶತ್ರು:
ಸಮಾಜದಲ್ಲಿ ಪುರುಷರಿಗೆ ಸ್ತನ ಕ್ಯಾನ್ಸರ್ ಬರುತ್ತದೆ ಎಂಬ ಅರಿವಿನ ಕೊರತೆ ಬಹಳಷ್ಟಿದೆ. ಇದರೊಂದಿಗೆ ಅನಗತ್ಯ ಮುಜುಗರದ ಭಾವನೆಯಿಂದಾಗಿ ಅನೇಕ ಪುರುಷರು ಆರಂಭಿಕ ಹಂತದ ರೋಗಲಕ್ಷಣಗಳನ್ನು ಮುಚ್ಚಿಡುತ್ತಾರೆ. ಇದರಿಂದಾಗಿ ರೋಗ ಪತ್ತೆ ವಿಳಂಬವಾಗಿ, ರೋಗವು ಉಲ್ಬಣಗೊಳ್ಳುವ ಅಪಾಯವಿರುತ್ತದೆ.
ಕ್ಯಾನ್ಸರ್ ಎನ್ನುವುದು ಯಾವುದೇ ಲಿಂಗಭೇದವಿಲ್ಲದೆ ಯಾರಿಗೆ ಬೇಕಾದರೂ ಬರಬಹುದು. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚಿ, ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡರೆ ಪ್ರಾಣಾಪಾಯದಿಂದ ಸಂಪೂರ್ಣವಾಗಿ ಸುರಕ್ಷಿತವಾಗಿರಬಹುದು ಹಾಗೂ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ಮೆಟ್ಟಿನಿಲ್ಲಬಹುದು.