ಪ್ರೀತಿ ಆರೈಕೆ ಟ್ರಸ್ಟ್ – ಆರೋಗ್ಯ ಶಿಬಿರ ಯಶಸ್ವಿ
ದಾವಣಗೆರೆ: ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಆಸ್ಪತ್ರೆ ಸಹಯೋಗದಲ್ಲಿ ಪ್ರತಿ ವಾರಾಂತ್ಯದಲ್ಲಿ ಆಯೋಜಿಸುವ ಆರೋಗ್ಯ ಉಚಿತ ತಪಾಸಣೆ ಶಿಬಿರವು ಯಶಸ್ವಿಯಾಯಿತು.
ದಾವಣಗೆರೆ ನಗರದ ಜಾಲಿನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಶಿಬಿರವು ಶಬಿವಾರ ಮುಂಜಾನೆ ನೆರವೇರಿತು.
ಮುಂಜಾನೆ 7 ಗಂಟೆಯಿಂದಲೇ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಉತ್ಸಾಹದಿಂದ ಭಾಗವಹಿಸಿದರು. ಜಾಲಿನಗರ ಬಡಾವಣೆ ಮತ್ತು ಸುತ್ತಮುತ್ತಲಿನ ಸುಮಾರು 320ಕ್ಕೂ ಹೆಚ್ಚಿನ ನಾಗರೀಕರು ತಪಾಸಣೆ ಮಾಡಿಸಿಕೊಂಡು ಡಾ. ಟಿ.ಜಿ.ರವಿ ಕುಮಾರ್ ನೇತೃತ್ವದ ವೈದ್ಯಕೀಯ ತಂಡದಿಂದ ಸಲಹೆ, ಚಿಕಿತ್ಸೆ ಪಡೆದರು.
ಜಾಲಿನಗರದ ನಿವಾಸಿಗಳ ಪರವಾಗಿ ಮಾತನಾಡಿದ ವೆಂಕಟೇಶ್, ಆರೋಗ್ಯದ ಬಗ್ಗೆ ಜನ ಸಾಮಾನ್ಯರಲ್ಲಿ ಹೆಚ್ಚಿನ ಅರಿವು ಇರುವುದಿಲ್ಲ. ಆಸ್ಪತ್ರೆಗೆ ಹೋದರೆ ಹೆಚ್ಚು ಖರ್ಚು ಎಂದು ಎಷ್ಟೋ ಬಾರಿ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ, ವೈದ್ಯರಾದ ಡಾ.ರವಿಕುಮಾರ್ ಅವರ ತಂಡವು ನಾವು ಇದ್ದಲ್ಲಿಗೇ ಬಂದು, ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದರಿಂದಾಗಿ ನಮ್ಮ ಹಣವೂ ಉಳಿತಾಯವಾಗಿದೆ. ಅದಕ್ಕಿಂತ ಮುಖ್ಯವಾಗಿ ನಮ್ಮ ದೇಹಾರೋಗ್ಯದ ಸ್ಥಿತಿಗತಿ ಬಗ್ಗೆ ಅರಿವಾಗಿದೆ. ಇದಕ್ಕೆಲ್ಲ ಕಾರಣರಾದ ಪ್ರೀತಿ ಆರೈಕೆ ಟ್ರಸ್ಟ್ ಸಿಬ್ಬಂದಿಗೆ ಬಡಾವಣೆಯ ಪರವಾಗಿ ಧನ್ಯವಾದ ತಿಳಿಸುತ್ತೇವೆ ಎಂದು ಹೇಳಿದರು.
* ಆರೋಗ್ಯವೇ ಭಾಗ್ಯ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ – ಡಾ ಟಿ ಜಿ ರವಿ ಕುಮಾರ್*
ಕಾರ್ಯದರ್ಶಿ ಡಾ. ಟಿ.ಜಿ. ರವಿಕುಮಾರ್ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ನಮಗೆಲ್ಲ ಗೊತ್ತಾಗಿದೆ. ಆದರೆ, ಒತ್ತಡದ ಬದುಕಿನಲ್ಲಿ ಎಷ್ಟೋ ಬಾರಿ ಸಣ್ಣಪುಟ್ಟ ಏರುಪೇರುಗಳನ್ನು ಮರೆರತು ಬಿಡುತ್ತೇವೆ. ಇವುಗಳಿಂದಲೇ ಹೆಚ್ಚಿನ ಆಪತ್ತು ಬರುವ ಸಂಭವ ಇರುತ್ತದೆ. ಹೀಗಾಗಿ, ದಾವಣಗೆರೆ ನಗರ ಮತ್ತು ಜಿಲ್ಲೆಯ ಎಲ್ಲ ಭಾಗಗಳಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಿದ್ದೇವೆ. ದೇಶ ವಾಸಿಗಳ ಆರೋಗ್ಯವು ದೇಶದ ಅಭಿವೃದ್ಧಿಗೆ ಪೂರಕವಾಗಲಿ ಎಂಬ ಸದಾಶಯ ನಮ್ಮದಾಗಿದೆ ಎಂದು ಹೇಳಿದರು.
ದಾವಣಗೆರೆಯ ಮೇಯರ್ ಶ್ರೀ ವಿನಾಯಕ್ ಪೈಲ್ವಾನ್ ಮತ್ತು ಪಾಲಿಕೆ ಸದಸ್ಯರಾದ ಶ್ರೀ ಗಾಯತ್ರಿ ಬಾಯಿ ರವರು ಪ್ರೀತಿ ಆರೈಕೆ ಟ್ರಸ್ಟ್ ಆಯೋಜಿಸಿದ್ದ ಶಿಬಿರಕ್ಕೆ ಹೆಚ್ಚಿನ ಸಹಕಾರ ನೀಡಿದರು.
ಶಿಬಿರದಲ್ಲಿ ಮಾಜಿ ಶಾಸಕರಾದ ಶ್ರೀ ಗುರುಸಿದ್ದಗೌಡ, ಉದ್ಯಮಿಗಳಾದ ನಾಗರಾಜಸ್ವಾಮಿ, ಟ್ರಸ್ಟ್ ಸಿಬ್ಬಂದಿಗಳಾದ ನುಂಕೇಶ್, ಶ್ವೇತಾ, ವಿಜಯ್ ಕುಮಾರ್, ಅಭಿಜಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು.