ಆರೋಗ್ಯ ಸುಧಾರಣೆ ಹಾಗೂ ಪಿಟ್ನೆಸ್ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ವಾಕಿಂಗ್ ಮಾಡುತ್ತೇವೆ. ಸಾಮಾನ್ಯವಾಗಿ ಬೆಳಗಿನ ಹೊತ್ತು ವಾಕಿಂಗ್ ಮಾಡುವುದು ರೂಢಿ. ಆದರೆ ಮುಂಜಾನೆಗಿಂತ ಸಂಜೆಯ ವಾಕ್ ಬೆಸ್ಟ್ .
ಇತ್ತೀಚೆಗೆ ಹೃದಯಾಘಾತ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳು ಜನರನ್ನು ಹೆಚ್ಚು ಬಾಧಿಸುತ್ತಿದೆ. ಆದರೆ ಈ ಸಮಸ್ಯೆಗಳು ಆರೋಗ್ಯ ಕಾಳಜಿಯ ಪಾಠವನ್ನೂ ತಿಳಿಸಿವೆ. ಹೀಗಾಗಿ ಜನರು ಈಗ ಆರೋಗ್ಯ ಸುಧಾರಣೆಯ ಉದ್ದೇಶದಿಂದ ಜೀವನಶೈಲಿಯ ಸುಧಾರಣೆಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಆಹಾರ ಕ್ರಮ, ದೈಹಿಕ ಚಟುವಟಿಕೆಯತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ವಾಕಿಂಗ್ ಮಾಡುವುದು ದೈಹಿಕ ಚಟುವಟಿಕೆಯ ಭಾಗವಾಗಿದೆ. ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸಂಜೆ ಹೊತ್ತಿನಲ್ಲಿ ವಾಕಿಂಗ್ ಮಾಡುವುದರಿಂದ ಇನ್ನೂ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು .
ಸಂಜೆ ವೇಳೆ ವಾಕ್ ಮಾಡುವುದರಿಂದಾಗುವ ಪ್ರಯೋಜನಗಳೇನು?
ಉತ್ತಮ ನಿದ್ದೆ; ಸಂಜೆ ಆರಂಭವಾಗುವ ಹೊತ್ತಿನಲ್ಲಿ ವಾಕಿಂಗ್ ಮಾಡುವುದರಿಂದ ನಮ್ಮ ನಿದ್ದೆಯ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು. ಹಗಲಿನ ವೇಳೆ ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ದೇಹವು ಸಂಜೆ ಹೊತ್ತಿನ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ. ಇದು ನಿದ್ದೆಯ ಸಮಯ ಎಂದು ಮೆದುಳಿಗೆ ಸಂಕೇತ ನೀಡುತ್ತದೆ. ಸಂಜೆಯ ಆರಂಭವಾಗುವ ಹೊತ್ತಿನಲ್ಲಿ ವಾಕಿಂಗ್ ಮಾಡುವುದರಿಂದ ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಾಧ್ಯ ಮತ್ತು ಶಾಂತವಾಗಿ ನಿದ್ರಿಸಬಹುದು.
ಒತ್ತಡ ನಿಯಂತ್ರಣಕ್ಕೆ ವಾಕಿಂಗ್ ಉತ್ತಮ ಮಾರ್ಗ. ವಿಶೇಷವಾಗಿ ಸಂಜೆ ಆರಂಭವಾಗುವ ಹೊತ್ತಿನಲ್ಲಿ ನಡೆಯುವುದರಿಂದ ಸಾಕಷ್ಟು ಒತ್ತಡ ಕಡಿಮೆಯಾಗುತ್ತದೆ. ಕೆಲಸ ಅಥವಾ ಶಾಲೆಯಲ್ಲಿ ದಿನವಿಡೀ ಕಳೆದು ಬರುವವರು ಸಂಜೆ ವೇಳೆಯಲ್ಲಿ ವಾಕಿಂಗ್ ಮಾಡುವುದರಿಂದ ಮನಸ್ಸು ಸುಧಾರಿಸುತ್ತದೆ. ಇದು ದಿನದ ಒತ್ತಡವನ್ನು ಕಡಿಮೆ ಮಾಡಲು ಅವಕಾಶ ನೀಡುತ್ತದೆ. ಅಲ್ಲದೆ, ಒಟ್ಟಾರೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮನಸ್ಥಿತಿಯ ಸುಧಾರಣೆ ;ನಿಯಮಿತ ವ್ಯಾಯಾಮವು ನಮ್ಮ ಮನಸ್ಥಿತಿಯನ್ನು ಸುಧಾರಿಸಿ, ಖಿನ್ನತೆ ಹಾಗೂ ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಸಾಬೀತಾಗಿದೆ. ಸಂಜೆ ಆರಂಭವಾಗುವ ವೇಳೆ ವಾಕ್ ಮಾಡುವುದರಿಂದ ಆಗಿನ ದ್ರಶ್ಯಾವಳಿಗಳು, ತಾಜಾಗಾಳಿಯು ಮನಸ್ಥಿತಿಗೆ ಇನ್ನಷ್ಟು ಮುದ ಸಿಗುವಂತೆ ಮಾಡುತ್ತದೆ. ಇದು ಮನಸ್ಸು ಧನಾತ್ಮಕವಾಗಿ ಯೋಚಿಸಲು ಸಹಾಯ ಮಾಡುತ್ತದೆ.
ಹೃದಯ ಆರೋಗ್ಯ ಸುಧಾರಣೆ; ವಾಕಿಂಗ್ ಮಾಡುವುದು ದೇಹಕ್ಕೆ ಅಷ್ಟೊಂದು ಸುಸ್ತು ಮಾಡುವುದಿಲ್ಲ. ಅಲ್ಲದೆ ಇದಕ್ಕೆ ಶ್ರಮವೂ ಕಡಿಮೆ. ಇದು ರಕ್ತದೊತ್ತಡವನನ್ನು ಕಡಿಮೆ ಮಾಡಿ ಹೃದಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ಸಂಜೆಯ ಆರಂಭವಾಗುವ ವೇಳೆಯಲ್ಲಿ ಒಂದು ಸಣ್ಣ ನಡಿಗೆಯು ಉರಿಯೂತವನ್ನು ಕಡಿಮೆ ಮಾಡಲು ಹಾಗೂ ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಸುಧಾರಿಸುವಂತಹ ಪ್ರಯೋಜನಗಳನ್ನು ನೀಡುತ್ತದೆ.
ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ;ವಾಕಿಂಗ್ ಮಾಡುವುದರಿಂದ ದೇಹಕ್ಕೆ ಸುಸ್ತಾದಂತೆ ಅನ್ನಿಸಿದರೂ ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಎಂಬುದನ್ನು ಸಂಶೋಧನೆಗಳು ಸಾಬೀತು ಪಡಿಸಿವೆ. ಸಂಜೆ ವೇಳೆ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಚೈತನ್ಯ ಹೆಚ್ಚಿರುತ್ತದೆ.
ತೂಕ ನಿರ್ವಹಣೆ; ತೂಕ ನಿರ್ವಹಣೆ ಹಾಗೂ ತೂಕ ಇಳಿಕೆಗೆ ವಾಕಿಂಗ್ ಪರಿಣಾಮಕಾರಿ ಮಾರ್ಗ. ಸಂಜೆ ಆರಂಭವಾಗುವ ಹೊತ್ತಿನಲ್ಲಿ ವಾಕಿಂಗ್ ಮಾಡುವುದರಿಂದ ಕ್ಯಾಲೊರಿ ಬರ್ನ್ ಮಾಡಬಹುದು, ಇದು ಚಯಾಪಚಯ ಕ್ರಿಯೆಯ ಸುಧಾರಣೆಯೂ ಸಹಕಾರಿ. ಆ ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ. ಇದು ಆಹಾರದ ಕಡುಬಯಕೆಗಳ ನಿಯಂತ್ರಣಕ್ಕೂ ಸಹಕಾರಿ. ಕಡುಬಯಕೆಯಿಂದ ಅತಿಯಾಗಿ ತಿನ್ನಬೇಕು ಅನ್ನಿಸುವುದು ಸಹಜ, ಇದರ ನಿಯಂತ್ರಣಕ್ಕೆ ವಾಕಿಂಗ್ ಉತ್ತಮ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ; ಸಂಜೆ ವೇಳೆ ವಾಕಿಂಗ್ ಮಾಡುವುದರಿಂದ ನೆನಪಿನ ಹಾಗೂ ಅರಿವಿನ ಶಕ್ತಿ ಸುಧಾರಿಸುತ್ತದೆ. ಇದು ಯುವಕರು ಹಾಗೂ ವಯಸ್ಸಾದವರು ಇಬ್ಬರಿಗೂ ಪರಿಣಾಮಕಾರಿ. ಸಂಜೆ ಆರಂಭವಾಗುವ ಹೊತ್ತಿನಲ್ಲಿ ವಾಕಿಂಗ್ ಮಾಡುವುದರಿಂದ ಮಾನಸಿಕ ಒತ್ತಡಗಳಿಂದ ಅಲ್ಪಾವಧಿಯ ವಿರಾಮವನ್ನು ನೀಡುತ್ತದೆ. ಅಲ್ಲದೆ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಮನಸ್ಸು ತೀಕ್ಷ್ಮವಾಗಿರುವಂತೆ ನೋಡಿಕೊಳ್ಳುತ್ತದೆ. ಮನಸ್ಸಿನ ಸೃಜನಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.