ತಂಬಾಕು ಉತ್ಪನ್ನ ಬಳಕೆಯಿಂದ ನಿತ್ಯ3500,ಜನರ ಅಕಾಲಿಕ ಸಾವು: ಮಹಾಂತೇಶ್ ಬಿ. ಉಳ್ಳಾಗಡ್ಡಿ

ArogyaVijaya Kannada
2 Min Read
ದಾವಣಗೆರೆ: ತಂಬಾಕು(Tobacco)ಉತ್ಪನ್ನಗಳ ಬಳಕೆಯ ದುಷ್ಪರಿಣಾಮ ದೇಶದಲ್ಲಿ ಪ್ರತಿ ನಿತ್ಯ 3,500
ಕ್ಕೂ ಹೆಚ್ಚು ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ ಎಂದು ರಾಜ್ಯ ತಂಬಾಕು ನಿಯಂತ್ರಣ ಘಟಕ ವಿಭಾಗೀಯ ಸಂಯೋಜಕ ಮಹಾಂತೇಶ್ ಬಿ. ಉಳ್ಳಾಗಡ್ಡಿ ತಿಳಿಸಿದರು.
ಶುಕ್ರವಾರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶ ನಾಲಯ ವತಿಯಿಂದ ತಂಬಾಕು ಹಾಗೂ ಅದರ ದುಷ್ಪರಿಣಾಮಗಳು, ತಂಬಾಕು ಮಾರಾಟಗಾರರಿಗೆ ಪರವಾನಗಿ ಮತ್ತು ಕೋಟ್ಪಾ-2003ರ ಕಾಯ್ದೆ ಕುರಿತು ಮಾಧ್ಯಮದವರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತ ನಾಡಿದರು.
ಪ್ರಾರಂಭಿಕ ಹಂತದಲ್ಲಿ ಕುತೂಹಲ, ಹವ್ಯಾಸಕ್ಕೆ ಏನಾದರೂ ತಂಬಾಕು ಪದಾರ್ಥಗಳ ಉತ್ಪನ್ನಗಳ ಬಳಕೆ ಮಾಡಿದರೆ ಮುಂದೆ ಅದು ಅಭ್ಯಾಸ, ಚಟವಾಗಿ ಕೊನೆಗೆ ಎಂತಹವರನ್ನೂ ದಾಸ್ಯರನ್ನಾಗಿ ಮಾಡುತ್ತದೆ. ವೈಯಕ್ತಿಕ, ಕುಟುಂಬ, ಸಮಾಜ, ದೇಶದ ಹಿತದೃಷ್ಟಿಯಿಂದ ತಂಬಾಕು ಪದಾರ್ಥಗಳ ಉತ್ಪನ್ನಗಳ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು.
ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ತಂಬಾಕು ಬೆಳೆಯುವ ಮತ್ತು ಉತ್ಪನ್ನಗಳ ಬಳಕೆ ಮಾಡುವ ದೇಶವಾಗಿರುವ ಭಾರತದಲ್ಲಿ ತಂಬಾಕು ಪದಾರ್ಥಗಳ ಬಳಕೆ ಮಾಡುವವರ ಸಂಖ್ಯೆ 33.2 ಕೋಟಿಯಷ್ಟಿದೆ. ಅದರಲ್ಲಿ ಶೇ.14.6ರಷ್ಟು 13 ರಿಂದ 15 ವರ್ಷದ ಮಕ್ಕಳಿರುವುದು ನಿಜಕ್ಕೂ ಆತಂಕಕಾರಿ. ತಂಬಾಕು ಉತ್ಪನ್ನಗಳ ಬಳಕೆಯಿಂದ ಬರುವ ಆರೋಗ್ಯ ಸಮಸ್ಯೆಯಿಂದಾಗಿಯೇ ಪ್ರತಿ ವರ್ಷ 13 ಲಕ್ಷ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
ತಂಬಾಕು ಉತ್ಪನ್ನಗಳ ಬಳಕೆಗೆ ಯುವ ಜನಾಂಗ ಅತಿ ಸುಲಭವಾಗಿ ಒಳಗಾಗುತ್ತದೆ. ಒಮ್ಮೆ ಚಟವಾದರೆ ಏನೇ ಮಾಡಿದರೂ ಬಿಡಲಿಕ್ಕೆ ಆಗುವುದಿಲ್ಲ. ಅತಿ ಸಣ್ಣ ವಯಸ್ಸಿನಲ್ಲೇ ಅಕಾಲಿಕ ಮರಣಕ್ಕೆ ತುತ್ತಾಗುವುದರಿಂದ ಕುಟುಂಬ, ಸಮಾಜದ ಮೇಲೆ ಭಾರೀ ಪರಿಣಾಮ ಬೀರುವುದನ್ನ ಸಮರ್ಥವಾಗಿ ತಡೆಗಟ್ಟುವ ಉದ್ದೇಶದಿಂದ ಕೋಟ್ಪಾ-2003 ಕಾಯ್ದೆ ಜಾರಿಗೆ ತರಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಅತೀ ಪರಿಣಾಮಕಾರಿಯಾಗಿ ಕೋಟ್ಪಾ ಕಾಯ್ದೆ ಜಾರಿಗೆ ತರ ಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ|ಸುಧೀಂದ್ರ ಮಾತನಾಡಿ, ಅತಿ ಸುಲಭವಾಗಿ ಎಲ್ಲೆಂದರೆಲ್ಲಿ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ತಂಬಾಕು, ಗುಟ್ಕಾ, ಜರ್ದಾ ಮಾರಾಟವನ್ನ ನಿಯಂತ್ರಿಸುವ ಉದ್ದೇಶದಿಂದ ಈಗ ತಂಬಾಕು ಉತ್ಪನ್ನಗಳ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಒಂದೊಮ್ಮೆ ಪಡೆಯದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಈಗಾಗಲೇ ಟ್ರೇಡ್ ಲೈಸೆನ್ಸ್ ಹೊಂದಿದವರಿಗೆ ಪರ ವಾನಗಿ ನೀಡಲಾಗುವುದು. ಮುಂದಿನ ಹಂತದಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ನೀಡಲಾಗುವುದು. ನಗರಪಾಲಿಕೆಯಲ್ಲಿ ಅತಿ ಸುಲಭವಾಗಿ ಪರವಾನಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ
ಡಾ| ಜಿ.ಡಿ. ರಾಘವನ್, ಕೋಟ್ಪಾ ಕಾಯ್ದೆ-2003ರ ಪರಿಣಾಮಕಾರಿ ಅನುಷ್ಠಾನದ ಉದ್ದೇಶದಿಂದ ತಂಬಾಕು ಉತ್ಪನ್ನಗಳ ಮಾರಾಟಗಾರರು ಪರವಾನಗಿ ಪಡೆಯುವುದ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಆರೋಗ್ಯಾಧಿಕಾರಿ   ಡಾ| ಎಸ್. ಷಣ್ಮುಖಪ್ಪ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ| ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸತೀಶ್ ಕಲಹಾಳ್, ಕೆ.ಪಿ. ದೇವರಾಜ್ ಇತರರು ಇದ್ದರು.
Share this Article
Leave a comment

Leave a Reply

Your email address will not be published. Required fields are marked *