ದಾವಣಗೆರೆ : (ನಂ – 10 ) ಕನ್ನಡ ಚಿತ್ರರಂಗದ ಪ್ರಯೋಗಾತ್ಮಕ ನಟ ಚಿಂತಕರಾಗಿದ್ದ ದಿ. ಶಂಕರ್‌ನಾಗ್ ಅವರ ಜನ್ಮದಿನದ ಅಂಗವಾಗಿ ದಾವಣಗೆರೆ ನಗರದ ಆಟೋ ಚಾಲಕರಿಗೆ ಒಂದು ವರ್ಷವಿಡೀ ಉಚಿತವಾಗಿ ಒಪಿಡಿ ಚಿಕಿತ್ಸಾ ಸೌಲಭ್ಯ ನೀಡುವ ಪ್ರೀತಿ ಆರೈಕೆ ಹೆಲ್ತ್ ಕಾರ್ಡ್ ನೀಡಲಾಯಿತು.
ದಾವಣಗೆರೆ ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಶಾಸಕರು ಮತ್ತು ಆರೈಕೆ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಟಿ. ಗುರುಸಿದ್ಧನಗೌಡ ಮತ್ತು ಆರೈಕೆ ಆಸ್ಪತ್ರೆ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ ಅವರು ಹೆಲ್ತ್ ಕಾರ್ಡ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಡಾ.ರವಿಕುಮಾರ್ ಅವರು ಮಾತನಾಡಿ, ಆಟೋ ರಿಕ್ಷಾಗಳಲ್ಲಿ ನಾವೆಲ್ಲರೂ ಪ್ರಯಾಣಿಸಿ, ಪ್ರಯೋಜನ ಪಡೆದಿದ್ದೇವೆ. ಎಲ್ಲ ಆಟೋ ಚಾಲಕರು ಹಗಲಿರುಳೆನ್ನದೇ ಕುಟುಂಬ ನಿರ್ವಹಣೆಗಾಗಿ ನಮಗೆ ಸೇವೆ ನೀಡುತ್ತಿದ್ದಾರೆ. ದುಬಾರಿ ದಿನಗಳಲ್ಲಿ ಅವರ ಕುಟುಂಬ, ಆರೋಗ್ಯದ ಕಾಳಜಿ ಕಷ್ಟವೆನಿಸುತ್ತಿದೆ. ಇದನ್ನು ಮನಗಂಡು ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಆಟೋ ಚಾಲಕರು ಮತ್ತವರ ಪತ್ನಿಗೆ ಒಂದು ವರ್ಷಗಳ ಕಾಲ ಉಚಿತವಾಗಿ ಒಪಿಡಿ ಸೇವೆ ನೀಡುವ ಹೆಲ್ತ್ ಕಾರ್ಡ್ ನೀಡಿದ್ದೇವೆ ಎಂದರು.
ಅತ್ಯಂತ ಕ್ರಿಯಾಶೀಲರಾಗಿ ಸದ್ದಿಲ್ಲದೇ ತಮ್ಮ ಕೆಲಸಗಳನ್ನು ನಿರ್ವಹಿಸಿ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನು ಅಗಲಿದ ಶಂಕರ್‌ನಾಗ್ ಅವರು ಆಟೋ ಚಾಲಕರಿಗೆ ಇಂದಿಗೂ ಅಚ್ಚುಮೆಚ್ಚು ಎನಿಸಿದ್ದಾರೆ. ಹೀಗಾಗಿ, ನಮ್ಮೆಲ್ಲರನ್ನೂ ಸುರಕ್ಷಿತವಾಗಿ ನಗರೆದೆಲ್ಲೆಡೆ ಕರೆದೊಯ್ಯುವ ಆಟೋ ಚಾಲಕರಿಗಾಗಿ ನಮ್ಮ ಸಾರಥಿಗಳಿಗೆ ನಮ್ಮ ಆರೈಕೆ ಎಂಬ ಹೆಲ್ತ್ ಕಾರ್ಡ್ ನೀಡಿದ್ದೇವೆ ಎಂದು ಹೇಳಿದರು.
ಯಾವುದೇ ಆಡಂಬರ ಮತ್ತು ಅಬ್ಬರದ ಪ್ರಚಾರವಿಲ್ಲದೆಯೇ ನಮ್ಮ ಸಮಾಜಕ್ಕೆ ನಮ್ಮ ಕೈಲಾದ ಸೇವಯನ್ನು ಮುಂದುವರಿಸಲಿದ್ದೇವೆ. ಈವರೆಗಿನ 33ಕ್ಕೂ ಹೆಚ್ಚಿನ ಶಿಬಿರಗಳ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಆಟೋ ಚಾಲಕರಾದ ವೀರಪ್ಪ, ಮಂಜುನಾಥ್, ವಾಸೀಂ, ನಾಗರಾಜ್ ಸೇರಿದಂತೆ ಹಲವು ಆಟೋ ಚಾಲಕರಿಗೆ ಪ್ರೀತಿ- ಆರೈಕೆ ಹೆಲ್ತ್ ಕಾರ್ಡ್ ನೀಡಲಾಯಿತು. ಸಮಾರಂಭದಲ್ಲಿ ವೈದ್ಯರಾದ ಡಾ. ಹಾಲಸ್ವಾಮಿ ಕಂಬಾಳಿಮಠ, ರೂಪಾ ಎಚ್.ಕೆ. ಉದ್ಯಮಿಗಳಾದ ನಾಗರಾಜಸ್ವಾಮಿ, ಪ್ರವೀಣ್ ಪಾಟೀಲ್, ನುಂಕೇಶ್ ಇದ್ದರು.