ಅಸಾಂಕ್ರಾಮಿಕ, ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ವ್ಯಾಪಕ ಚಿಕಿತ್ಸಾ ಕ್ರಮ; ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ : ದಾವಣಗೆರೆ;(ಸೆಪ್ಟೆಂಬರ್.16) ಕೇಂದ್ರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಷ್ಮಾನ್ ಭವ ಅಭಿಯಾನದಡಿ ಅಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ವ್ಯಾಪಕ ಚಿಕಿತ್ಸೆ ಮತ್ತು ಅರಿವು ಮೂಡಿಸಲು ಡಿಸೆಂಬರ್ 31 ರ ವರೆಗೆ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಆಯುಷ್ಮಾನ್ ಭವ ಯೋಜನೆಯಡಿ ವರ್ಷಕ್ಕೆ ಬಿಪಿಎಲ್ ಕುಟುಂಬಕ್ಕೆ ಐದು ಲಕ್ಷ ಮತ್ತು ಎಪಿಎಲ್ ಕುಟುಂಬಕ್ಕೆ ರೂ.1.30 ಲಕ್ಷ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಈ ಕಾರ್ಡ್‍ಗಳು ಎಲ್ಲರಿಗೂ ತಲುಪಬೇಕು ಮತ್ತು ಕಾಲಮಿತಿಯೊಳಗೆ ಎಲ್ಲರಿಗೂ ಚಿಕಿತ್ಸೆ ಲಭಿಸಬೇಕೆಂದು ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದ ಒತ್ತಡ, ಹೃದಯ ಸಂಬಂಧಿ ಖಾಯಿಲೆ ಸೇರಿದಂತೆ ಇನ್ನಿತರೆ ಮತ್ತು ಸಾಂಕ್ರಾಮಿಕ ರೋಗಗಳಾದ ಕುಷ್ಠರೋಗ, ಕ್ಷಯ, ರಕ್ತಹೀನತೆ, ಅಪೌಷ್ಟಿಕತೆ, ಕಣ್ಣಿನ ದೋಷ, ಕಿವಿಗೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆಯನ್ನು ನೀಡಲು ಅಭಿಯಾನದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ; ಜಿಲ್ಲೆಯ ಮೆಲೆಬೆನ್ನೂರು, ಸಂತೆಬೆನ್ನೂರು, ಕೆರೆಬಿಳಚಿ ಹಾಗೂ ನ್ಯಾಮತಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಿಸೆಂಬರ್ 31 ರ ವರೆಗೆ ಪ್ರತಿ ಮಂಗಳವಾರ ಎಲ್ಲಾ ತಜ್ಞ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಪರೀಕ್ಷೆಗಳನ್ನು ಮಾಡುವ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ವೇಳೆ ಬಾಪೂಜಿ, ಎಸ್.ಎಸ್. ಮೆಡಿಕಲ್ ಕಾಲೇಜು, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ವೈದ್ಯರು ಭಾಗವಹಿಸಿ ಚಿಕಿತ್ಸೆ ನೀಡುವರು, ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ನ್ಯಾಯಬೆಲೆ ಅಂಗಡಿಯಲ್ಲಿಯು ಆಯುಷ್ಮಾನ್ ಭವ ಕಾರ್ಡ್; ಜಿಲ್ಲೆಯಲ್ಲಿ 3.80 ಲಕ್ಷ ಕುಟುಂಬ, 18 ಲಕ್ಷ ಜನಸಂಖ್ಯೆ ಇದ್ದು 5.20 ಲಕ್ಷ ಆಯುಷ್ಮಾನ್ ಕಾರ್ಡ್‍ಗಳನ್ನು ವಿತರಣೆ ಮಾಡಲಾಗಿದೆ. ಇನ್ನೂ 9 ಲಕ್ಷ ಕಾರ್ಡ್ ವಿತರಣೆ ಮಾಡಬೇಕಾಗಿದ್ದು ಈಗಿರುವ ಕೇಂದ್ರಗಳ ಜೊತೆಗೆ ನ್ಯಾಯಬೆಲೆ ಅಂಗಡಿಗಳಲ್ಲಿಯು ಆಯುಷ್ಮಾನ್ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಮತ್ತು ಆಪ್ ಮೂಲಕ ಸ್ವತಃ ಕಾರ್ಡ್ ಪಡೆದುಕೊಳ್ಳಬಹುದಾಗಿದೆ ಎಂದರು.
ಆಯುಷ್ಮಾನ್ ಸಭಾ : ಈ ಕಾರ್ಯಕ್ರಮವನ್ನು 2ನೇ ಅಕ್ಟೋಬರ್ 2023 ರಂದು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮತ್ತು ನಗರ ಪ್ರದೇಶಗಳ ವಾರ್ಡ್‍ಗಳಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಕಾರ್ಡ್‍ಗಳ ವಿತರಣೆ, ರಾಷ್ಟ್ರೀಯ ಕಾರ್ಯಕ್ರಮಗಳ ಅರಿವು ಮೂಡಿಸಲಾಗುತ್ತದೆ.
ಅಯುಷ್ಮಾನ್ ಅಭಿಯಾನದೊಂಗೆ ಸೇವಾ ಪಕ್ವಾಡಾ-ಪಾಕ್ಷಿಕವನ್ನು ಹಮ್ಮಿಕೊಳ್ಳಲಾಗಿದ್ದು, ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳು ಹಾಗೂ ಅಂಗಾಂಗ ದಾನದ ಬಗ್ಗೆ ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಭಿಯಾನದಲ್ಲಿ ನಗರ ಪ್ರದೇಶಗಳ ವಾರ್ಡ್ ಸಮಿತಿ ಸದಸ್ಯರುಗಳು, ಗ್ರಾಮೀಣ ಮಟ್ಟದಲ್ಲಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸಬೇಕು. ಆಯುಷ್ಮಾನ್ ಕಾರ್ಡ್ ಗಳ
ವಿತರಣೆ, ಅಸಾಂಕ್ರಾಮಿಕ ರೋಗಗಳ ತಪಾಸಣೆ, ಕ್ಷಯರೋಗ ತಪಾಸಣೆ, ಶೇಕಡಾ 85 ಕ್ಕಿಂತ ಹೆಚ್ಚು ಕ್ಷಯರೋಗಿಗಳು ಗುಣಮುಖ, ಈ ಮಾನದಂಡಗಳನ್ನು ಅನುಸರಿಸಿ ಆಯುಷ್ಮಾನ್ ಗ್ರಾಮ ಪಂಚಾಯತ್ ಮತ್ತು ಆಯುಷ್ಮಾನ ನಗರ ವಾರ್ಡ್ ಎಂದು ಗುರುತಿಸಿ ಪ್ರಮಾಣ ಪತ್ರ, ಅನುದಾನ ನೀಡಿ ಗೌರವಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ.ಎಸ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.