ನಾನು ಎಂಬುದಕ್ಕಿಂತ ನಾವು ಎಂಬ ಭಾವಮೂಡಲಿ: ಡಾ. ಟಿಜಿಆರ್

ಪ್ರೀತಿ ಆರೈಕೆ ಟ್ರಸ್ಟ್ 38ನೇ ಆರೋಗ್ಯ ಉಚಿತ ತಪಾಸಣೆ ಶಿಬಿರ

ಹರಿಹರ :(ಡಿ.4 ) ನಾನು ಎಂಬುದಕ್ಕಿಂತ ನಾವು ಎಂಬ ಭಾವ ನಮ್ಮೆಲ್ಲರೆಲ್ಲೂ ಮೂಡಿದಾಗ ಆರೋಗ್ಯವಂತ ಮತ್ತು ಸುಂದರ ಸಮಾಜದ ನಿರ್ಮಾಣ ಸಾಧ್ಯವಿದೆ. ಹೀಗಾಗಿ, ಜೀವನದಲ್ಲಿ ಸದಾ ನನಗೇನು ಸಿಕ್ಕಿತು, ದಕ್ಕಿತು ಎಂಬುದನ್ನೇ ಲೆಕ್ಕ ಹಾಕುವ ಮನೋಭಾವದಿಂದ ಹೊರಬರಬೇಕಿದೆ ಎಂದು ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯದರ್ಶಿ ಡಾ. ರವಿಕುಮಾರ್ ಟಿ.ಜಿ ಹೇಳಿದರು.

ಹರಿಹರದ ಕೆಎಚ್‌ಬಿ ಬಡಾವಣೆಯ ಚೌಡಮ್ಮ ದೇವಸ್ಥಾನದ ಬಳಿ ಪ್ರೀತಿ ಆರೈಕೆ ಟ್ರಸ್ಟ್, ಆರೈಕೆ ಆಸ್ಪತ್ರೆಯ ಸಹಯೋಗದಲ್ಲಿ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ವಾರವಿಡೀ ದುಡಿಮೆ ಮಾಡಿ ಭಾನುವಾರದ ರಜಾದಿನ ಮನೆಯಲ್ಲಿಯೇ ವಿಶ್ರಾಂತಿ ಪಡೆಯಲು ಇಷ್ಟ ಪಡುತ್ತಾರೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಹರಿಹರದ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘವು ಅಪಾರ ಜನಸ್ಥೋಮವನ್ನು ಒಟ್ಟುಗೂಡಿಸಿ, ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಉಚಿತವಾಗಿ ವೈದ್ಯಕೀಯ ಸೇವೆ ನೀಡಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಸಂಘದ ಎಲ್ಲ ಸದಸ್ಯರು ಅತ್ಯಂತ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ ಕೆಲವರು ಅಂತರ್ಜಾಲದಲ್ಲಿನ ಅನಗತ್ಯದ ವಿಚಾರಗಳನ್ನು ತಿಳಿದು ತಾವಾಗಿಯೇ ಚಿಕಿತ್ಸೆ ಮಾಡಿಕೊಂಡು ಔಷಧ ಸೇವಿಸುತ್ತಾರೆ. ಇನ್ನೊಂದೆಡೆ ಗ್ರಾಮೀಣ ಭಾಗದ ಜನರು ಸೂಕ್ತ ಮಾಹಿತಿ ಇಲ್ಲದೆಯೇ ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ. ಈ ಎರಡೂ ವರ್ತನೆಗಳು ತಪ್ಪು. ನಮ್ಮ ದೇಹದ ಆರೋಗ್ಯವೇ ನಮ್ಮ ಬದುಕು, ಕುಟುಂಬ ಮತ್ತು ಆಲೋಚನೆಗಳನ್ನು ಸುಂದರವಾಗಿ ಇರಿಸಲು ಮೂಲ ಶಕ್ತಿ, ಕಾರಣ ಎಂದರೆ ತಪ್ಪಲ್ಲ. ಹೀಗಾಗಿ, ಆರೋಗ್ಯದ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಅಥವಾ ಆತಂಕ ಮಾಡಿಕೊಳ್ಳದೇ ಸೂಕ್ತ ವೈದ್ಯರಿಂದ ನಿಯಮಿತ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ಆರೋಗ್ಯದ ಸಾಮಾನ್ಯ ತೊಂದರೆಗಳಾದ ಮಧುಮೇಹ, ರಕ್ತದೊತ್ತಡ, ಹೃದಯರೋಗ, ಕೀಲುಮೂಳೆ ನೋವು, ಚರ್ಮರೋಗಕ್ಕೆ ನುರಿತ ವೈದ್ಯರಿಂದ ತಂಡದಿಂದ ಉಚಿತ ತಪಾಸಣೆ, ಮಾಹಿತಿ, ಸಲಹೆ, ಸೂಚನೆ, ಔಷಧ ನೀಡಲಾಯಿತು.

ತಪಾಸಣೆ ಶಿಬಿರದಲ್ಲಿ ಸಂಘದ ಅಧ್ಯಕ್ಷ ಜಿ.ಕೆ. ಮಲ್ಲಿಕಾರ್ಜುನ್, ಪಾಲಿಕೆ ಸದಸ್ಯರಾದ ದಿನೇಶ್ ಬಾಬು, ಆರೈಕೆ ಆಸ್ಪತ್ರೆ ವೈದ್ಯರಾದ ಡಾ. ಶಾಹೀದ್, ಸ್ಥಳೀಯರಾದ ವೀರಣ್ಣ ಯಾದವಾಡ, ಸುರೇಶ್ ಗೌಡ, ಪುಟ್ಟಣ್ಣ, ಪ್ರಸನ್ನ, ಎಂ.ಎನ್. ಶಿವಪ್ರಸಾದ್ ಸ್ವಾಮಿ, ರೇವಣಸಿದ್ದಪ್ಪ, ಪ್ರವೀಣ್ ಕುಮಾರ್, ರಾಮಮೂರ್ತಿ, ಪರಶುರಾಮ್ ಮತ್ತು ಪ್ರೀತಿ ಆರೈಕೆ ಟ್ರಸ್ಟ್ ಸಿಬ್ಬಂದಿಗಳಾದ ಐಶ್ವರ್ಯ, ನ್ಯಾನ್ಸಿ, ರಂಜಿತಾ, ವಿಜಯ್ ಕುಮಾರ್, ಪ್ರಕಾಶ್, ಕಿರಣ್ ಆಲೂರು ಭಾಗಿಯಾಗಿದ್ದರು.

Share this Article
Leave a comment

Leave a Reply

Your email address will not be published. Required fields are marked *