ರಾಗಿ ಬಲ್ಲವನಿಗೆ ಖಂಡಿತ ರೋಗವಿಲ್ಲ

ArogyaVijaya Kannada
2 Min Read

ದಾವಣಗೆರೆ : (ಅ- 21 ) ರಾಗಿ :ಅತ್ಯುತ್ತಮ ಆಹಾರ. ರಾಗಿ ಭಾರತೀಯ ಹವಾಮಾನ ಪರಿಸ್ಥಿತಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುವ ಬೆಳೆಯಾಗಿದೆ. ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ, ರಾಗಿ ಅಂಬಲಿ, ರಾಗಿ ಜ್ಯೂಸ್ ಹೀಗೆ ನಾನಾ ರೀತಿಯ ಅಡುಗೆಯನ್ನು ತಯಾರಿಸಬಹುದು. ರಾಗಿಯನ್ನು ತಿಂದರೆ ಅನೇಕ ರೋಗಗಳಿಂದ ದೂರ ಇರಬಹುದು ಎಂಬುದು ಸಾಬೀತಾಗಿದೆ.ಇನ್ನು ಕೆಲವರು ರಾಗಿಯ ರೊಟ್ಟಿ ಮಾಡಿಕೊಂಡು ಅದನ್ನು ಬಳಸುವರು. ರಾಗಿ ದೋಸೆ ಕೂಡ ತುಂಬಾ ಜನಪ್ರಿಯವಾಗಿದೆ. ರಾಗಿಯಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು ಇದು ನಮ್ಮ ಆರೋಗ್ಯ ಕಾಪಾಡಲು ತುಂಬಾ ಲಾಭಕಾರಿ. ರಾಗಿ ಮುದ್ದೆ, ನಾಟಿ ಕೋಳಿ ಸಾರು ಎಂದರೆ ನಮ್ಮ ಕನ್ನಡಿಗರು ಹೆಚ್ಚಿನವರು ಬಾಯಿ ಚಪ್ಪರಿಸುವರು. ಇದು ತುಂಬಾ ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಕರ್ನಾಟಕದ ಕೆಲವೊಂದು ಭಾಗಗಳಲ್ಲಿ ರಾಗಿ ಮುದ್ದೆಯನ್ನು ಪ್ರತಿನಿತ್ಯವೂ ಆಹಾರ ಕ್ರಮದಲ್ಲಿ ಬಳಕೆ ಮಾಡುವರು.ರಾಗಿಯನ್ನು ನಾವು ನಿತ್ಯವೂ ಬಳಸಿಕೊಂಡರೆ ಅದರಿಂದ ಸಿಗುವಂತಹ ಆರೋಗ್ಯ ಲಾಭಗಳನ್ನು ಪಡೆಯಬಹುದು.

ಬೇರೆ ಯಾವುದೇ ಧಾನ್ಯಗಳಲ್ಲಿ ಇಲ್ಲದೆ ಇರುವಂತಹ ಕ್ಯಾಲ್ಸಿಯಂ ಅಂಶವು ರಾಗಿಯಲ್ಲಿದ್ದು, ಇದು ಅಸ್ಥಿರಂಧ್ರತೆ ಸಮಸ್ಯೆಯನ್ನು ಕಡಿಮೆ ಮಾಡುವುದು. ಮಕ್ಕಳಿಗೆ ಆಹಾರ ಕ್ರಮದಲ್ಲಿ ರಾಗಿ ನೀಡಿದರೆ ಅದರಿಂದ ಮೂಳೆಗಳು ಬಲಗೊಳ್ಳುವುದು ಮತ್ತು ಹಲ್ಲುಗಳು ಕೂಡ ಬಲಿಷ್ಠವಾಗುವುದು.

ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡಲು ರಾಗಿಯಲ್ಲಿ ಇರುವಂತಹ ನಾರಿನಾಂಶವು ನೆರವಾಗಲಿದೆ. ಅಕ್ಕಿ ಮತ್ತು ಬೇರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ.

ರಾಗಿಯಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತಹೀನತೆ ನಿವಾರಣೆ ಮಾಡಲು ನೆರವಾಗುವುದು ಹಾಗೂ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡುವುದು. ಇದರಲ್ಲಿ ನೈಸರ್ಗಿಕ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಇದ್ದು, ಇದರಿಂದ ಕಬ್ಬಿಣಾಂಶವು ಬೇಗನೆ ಹೀರಿಕೊಳ್ಳುವುದು.

ತೂಕ ಇಳಿಸಿಕೊಳ್ಳಲು ಬಯಸುವವರು ರಾಗಿಯನ್ನು ಅನ್ನ ಮತ್ತು ಗೋಧಿ ಬದಲಿಗೆ ಬಳಕೆ ಮಾಡಬಹುದು. ಅಮಿನೋ ಆಂಲವು ತೂಕ ಇಳಿಸಲು ಸಹಕಾರಿ ಆಗಿದೆ. ಬೆಳೆಯುತ್ತಿರುವಂತಹ ಮಕ್ಕಳಿಗೆ ರಾಗಿ ನೀಡಿದರೆ ಅದು ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುವುದು ̤

ಇದೆಲ್ಲ ರಾಗಿಯಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳಾದರೆ, ರಾಗಿ ಸೇವನೆಯಿಂದ ನಮ್ಮ ಚರ್ಮ ಮತ್ತು ಕೂದಲ ಸೌಂದರ್ಯಕ್ಕೆ ಏನೆಲ್ಲ ಉಪಯೋಗಗಳಿವೆ ಎಂಬುದು ತಿಳಿದರೆ ನಿಮಗೆ ಅಚ್ಚರಿಯಾಗುವುದು ಖಂಡಿತ. ರಾಗಿಯು ನಮ್ಮ ದೇಹದ ಕಾಂತಿಯನ್ನು ರಕ್ಷಿಸುತ್ತದೆ, ಚರ್ಮದ ಆರೋಗ್ಯ ಮತ್ತು ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಚರ್ಮದ ಮೇಲಿನ ಕಜ್ಜಿಗಳು, ಸುಕ್ಕುಗಳು, ಚರ್ಮದ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ. ಹಾಗೇ, ಕೂದಲ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.

Share this Article
Leave a comment

Leave a Reply

Your email address will not be published. Required fields are marked *