ದಾವಣಗೆರೆ : ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ಸಾಮಾನ್ಯವಾಗಿ ಜನರು ಇಷ್ಟಪಡುವುದಿಲ್ಲ . ನಮ್ಮ ಸೌಂದರ್ಯ ಬೇರೆಯವರಿಗೆ ಚೆನ್ನಾಗಿ ಕಾಣಬೇಕು ಎಂದರೆ ಅದಕ್ಕೆ ನಮ್ಮ ತ್ವಚೆ ಮತ್ತು ನಮ್ಮ ತಲೆ ಕೂದಲು ಪ್ರಮುಖ ಕಾರಣವಾಗುತ್ತದೆ. ನಮ್ಮ ಸೌಂದರ್ಯಕ್ಕೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಕೂಡ ಮಾನ್ಯತೆ ಕೊಡಬೇಕು. ಉತ್ತಮ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಂಡರೆ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ. ನಾವು ಆರೋಗ್ಯಕರ ಎಂದು ತಿಳಿದುಕೊಂಡು ತಿನ್ನುವ ಬಹುತೇಕ ಆಹಾರ ಪದಾರ್ಥಗಳು ನಮ್ಮ ತಲೆ ಕೂದಲಿಗೆ ಸಕಾರಾತ್ಮಕವಾಗಿ ಕೆಲಸ ಮಾಡುತ್ತವೆ. ಇವುಗಳಿಂದ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತೇಜಿಸುತ್ತದೆ. ಚಿಕ್ಕ ವಯಸ್ಸಿಗೆ ತಲೆ ಕೂದಲು ಉದುರಿ ಹೋಗುವುದು, ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದುನ್ನು ನಿಯಂತ್ರಿಸಬಹುದು.
ಕೂದಲ ಅನೇಕ ಸಮಸ್ಯೆಗಳಿಗೆ ದಿವ್ಯ ಔಷಧಿ ತೆಂಗಿನ ಎಣ್ಣೆ. ಸೂಕ್ಷ್ಮಗ್ರಾಹಿ ಎಣ್ಣೆಯಾದ ತೆಂಗಿನ ಎಣ್ಣೆಯನ್ನು ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಅನ್ವಯಿಸುವುದರಿಂದ ಅನೇಕ ಸಮಸ್ಯೆಗಳ ನಿವಾರಣೆಯ ಜೊತೆಗೆ ಬಣ್ಣ ಬದಲಾವಣೆಯನ್ನು ನಿಯಂತ್ರಿಸಬಹುದು.ಕರಿಬೇವಿನ ಎಲೆಯು ಕೂದಲ ರಕ್ಷಣೆ ಹಾಗೂ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯಲ್ಲಿ ಕರಿಬೇವಿನ ಎಲೆಯನ್ನು ಸೇರಿಸಿ ಕುದಿಸಿ. ನಂತರ ತೈಲವನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಿ. ತಲೆ ಸ್ನಾನ ಮಾಡುವ ಮೊದಲು ನೆತ್ತಿ ಹಾಗೂ ಕೂದಲಿಗೆ ಅನ್ವಯಿಸಿ ಒಂದು ಗಂಟೆಗಳ ಕಾಲ ಬಿಡಿ. ಬಳಿಕ ತೊಳೆಯಿರಿ.
ಹಸಿರು ಎಲೆ ತರಕಾರಿಗಳು ತಮ್ಮಲ್ಲಿ ಕಬ್ಬಿಣದ ಅಂಶ, ಫೋಲೇಟ್, ಕ್ಯಾಲ್ಸಿಯಂ, ವಿಟಮಿನ್ ಮತ್ತು ಇನ್ನಿತರ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುತ್ತವೆ. ಪಾಲಕ್ ಸೊಪ್ಪು, ಹೂಕೋಸು, ಎಲೆಕೋಸು, ಬ್ರೊಕೋಲಿ ಇತ್ಯಾದಿಗಳು ಸೇರುತ್ತವೆ. ಇವುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ ಚಿಕ್ಕ ವಯಸ್ಸಿನಿಂದ ತಲೆಕೂದಲ ಸಮಸ್ಯೆ ಯಿಂದ ಪಾರಾಗಬಹುದು.
ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವುಗಳೆಲ್ಲವೂ ಡೈರಿ ಉತ್ಪನ್ನಗಳು. ಇವುಗಳಲ್ಲಿ ವಿಟಮಿನ್ ಬಿ12, ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಇನ್ನಿತರ ಪೌಷ್ಟಿಕಾಂಶ ಗಳು ಅಪಾರವಾಗಿದ್ದು, ತಲೆ ಕೂದಲಿನ ಸೊಂಪಾದ ಬೆಳವಣಿಗೆಗೆ ಅಗತ್ಯವಾದ ಮೆಲಾನಿನ್ ಉತ್ಪತ್ತಿಯನ್ನು ಹೆಚ್ಚು ಮಾಡುತ್ತವೆ.
ಪ್ರೋಟೀನ್ ಪ್ರಮಾಣವನ್ನು ಅಪಾರವಾಗಿ ಹೊಂದಿರುವ ಕೋಳಿ ಮೊಟ್ಟೆ ನಮ್ಮ ತಲೆ ಕೂದಲಿನ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ.ಇದರಲ್ಲಿ ವಿಟಮಿನ್ ಬಿ12 ಹೇರಳವಾಗಿದ್ದು, ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಮೊಟ್ಟೆಯ ಬಿಳಿ ಭಾಗ ಮತ್ತು ಹಳದಿ ಭಾಗ ಎರಡನ್ನು ಸೇವಿಸುವ ಅಭ್ಯಾಸ ಇದ್ದರೆ ಒಳ್ಳೆಯದು.