ದಾವಣಗೆರೆ ಸೆ.29 ಎಸ್‌ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಎಸ್.ಎಸ್.ನಾರಾಯಣ ಹೃದಯಾಲಯದ ವತಿಯಿಂದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಹೃದಯ ರೋಗ ತಜ್ನ ಜಿ ಶಿವಲಿಂಗಪ್ಪ
ನಾವು ಸೇವಿಸುವ ಆಹಾರ ಪದಾರ್ಥಗಳಾದ ಬಿಳಿ ಬಣ್ಣದ ಉಪ್ಪು, ಸಕ್ಕರೆ, ಮೈದಾ, ಅಕ್ಕಿ, ಹಾಲು ಇವುಗಳನ್ನು ತ್ಯಜಿಸಬೇಕಿದೆ. ಅದರ ಬದಲು ಕಾಳು, ತರಕಾರಿ ಮತ್ತು ಹಣ್ಣು ಸೇವಿಸಬೇಕು. ಇದು ಉತ್ತಮ ಆರೋಗ್ಯಕ್ಕೆ ಅಡಿಪಾಯ ಎಂದು ತಿಳಿಸಿದರು.
ಯುವಜನರ ಆಹಾರ ಪದ್ಧತಿ ನೋಡಿದರೆ ಬೇಸರವಾಗುತ್ತದೆ. ಮದ್ಯದೊಂದಿಗೆ ಅತಿಯಾದ ಆಹಾರ ಸೇವಿಸುವುದು, ಹೃದಯಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ. ನನಗೆ 87 ವರ್ಷ, ಕಳೆದ ಐದು ದಶಕಗಳಿಂದ ನಾನು ಮಾಂಸಾಹಾರ ಬಿಟ್ಟಿದ್ದೇನೆ. ನನ್ನ ತಟ್ಟೆಯಲ್ಲಿ ಬಳಿ ಆಹಾರ ಪದಾರ್ಥ ಇರುವುದಿಲ್ಲ. ಅದರ ಬದಲು ಬಣ್ಣದ ಆಹಾರ ಅಂದರೆ, ತರಕಾರಿ, ಕಾಳು, ರೊಟ್ಟಿ ಇರುತ್ತದೆ. ಇನ್ನಷ್ಟು ಆಹಾರ ಬೇಕಾದಲ್ಲಿ ಹಣ್ನನ್ನು ಸೇವಿಸುತ್ತೇನೆ. ಇದು ನನ್ನ ಆರೋಗ್ಯದ ಗುಟ್ಟು ಎಂದರು.
ನಮ್ಮಗಳ ಜೀವನಶೈಲಿ ಕಾಯಿಲೆಗಳಿಗೆ ಕಾರಣವಾಗಿದೆ. ನಾವು ಅಲಂಕಾರಕ್ಕೆ ಕೊಡುವ ಪ್ರಾಮುಖ್ಯತೆ ಹೃದಯಕ್ಕೆ ಕೊಡುತ್ತಿಲ್ಲ. ಉತ್ತಮ ಆಹಾರ, ವ್ಯಾಯಾಮ ಇವುಗಳು ಅಗತ್ಯವಾಗಿ ಅಳವಡಿಸಿಕೊಳ್ಳಬೇಕು. ಈ ವಿಚಾರಗಳನ್ನು ಯುವಜನತೆ ಮನಗಾಣಬೇಕಿದೆ. ಹೀಗಾದಲ್ಲಿ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ಕಳೆದ ಐದು ದಶಕಗಳ ಹಿಂದೆ ಹೃದಯ ಕಾಯಿಲೆ ಬಂತೆಂದರೆ ಮುಗಿದ ಕಥೆ ಅನ್ನುವಂತಾಗಿತ್ತು. ಈಗ ಆಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆಯನ್ನು ಕೊಡುವುದರ ಮೂಲಕ ಹೃದಯದ ಕಾಯಿಲೆಯನ್ನು ದೂರ ಮಾಡಬಹುದಾಗಿದೆ ಎಂದು ಹೇಳಿದರು.
ಮಕ್ಕಳ ತಜ್ಞ ಡಾ. ಎಂ.ಎಲ್. ಕುಲಕರ್ಣಿ ಮಾತನಾಡಿ, ಆರೋಗ್ಯ ಭಾಗ್ಯ ಅನ್ನುವುದನ್ನು ಪ್ರತಿಯೊಬ್ಬರು ಮನಗಾಣಬೇಕಿದೆ. 40 ವರ್ಷ ನಂತರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ. ಇದು ತಪ್ಪಬೇಕು, ಯೋಗ, ಆಹಾರ ಪದ್ಧತಿಯಿಂದ ಉತ್ತಮ ಜೀವನ ನಡೆಸಬೇಕು ಎಂದರು.
ಉಪ್ಪು, ಸಕ್ಕರೆ, ಕೊಬ್ಬಿನಂತಹ ಆಹಾರಗಳಿಂದ ದೂರವಿರಬೇಕು. ಮದ್ಯಪಾನ, ಧೂಮಪಾನ ಮಾಡಬಾರದು. ಕನಿಷ್ಟ ಐದು ದಿನಗಳ ಕಾಲ ವ್ಯಾಯಾಮ ಮಾಡಬೇಕು. ಬೇಗ ಮಲಗಿ, ಬೇಗ ಎದ್ದೇಳುವ ವ್ಯಕ್ತಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ ಅನ್ನುವುದು ಅರ್ಥ ಮಾಡಿಕೊಳ್ಳಬೇಕು ಎಂದರು.
ಗೋಲ್ಡನ್ ಆವರ್ ಉಪಯೋಗಕ್ಕೆ ಕಾರ್ಡಿಯಾಕ್ ಅಂಬುಲೆನ್ಸ್ ಮಾಡಿ
ಗೋಲ್ಡನ್ ಟೈಮ್‌ನಲ್ಲಿ ಚಿಕಿತ್ಸೆ ಸಿಗಲಿ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಬಹಳಷ್ಟು ಜನರು ಮೃತಪಟ್ಟಿದ್ದಾರೆ. ಹೃದಯಾಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ಅವರಿರುವ ಸ್ಥಳದಲ್ಲೇ ಕೊಡುವಂತಹ ವ್ಯವಸ್ಥೆ ಕಲ್ಪಿಸಬೇಕಿದೆ. ಹೃದಯಾಘಾತ ಸಂಭಂವಿಸಿದೆ ಎಂಬ ಮಾಹಿತಿ ತಿಳಿದ ತಕ್ಷಣ ಜನರು ಆಸ್ಪತ್ರೆಗೆ ಬರುವುದಿಲ್ಲ, ಆಸ್ಪತ್ರೆಯ ವೈದ್ಯರೇ ತುರ್ತು ವಾಹನದೊಂದಿಗೆ ರೋಗಿ ಬಳಿ ತೆರಳಿ, ಚಿಕಿತ್ಸೆ ನೀಡಬೇಕು. ಹೃದಯಾಘಾತ ಆದಾಗ ಇರುವ ಗೋಲ್ಡನ್ ಟೈಮ್‌ನಲ್ಲಿ ಚಿಕಿತ್ಸೆ ದೊರೆತರೆ ಜೀವ ಉಳಿಯುತ್ತದೆ. ಇದರಿಂದ ವ್ಯಕ್ತಿ, ಕುಟುಂಬ, ಸಮಾಜಕ್ಕೆ ಬಹಳಷ್ಟ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳು ಚಿಂತನೆ ನಡೆಸಬೇಕು ಎಂದು ಹೃದಯ ತಜ್ಞ ಡಾ. ಶಿವಲಿಂಗಪ್ಪ ಹೇಳಿದರು.
ಮಕ್ಕಳ ತಜ್ಞ ಡಾ. ಪಿ.ಎಸ್. ಸುರೇಶ್ ಬಾಬು, ಹಿರಿಯ ವೈದ್ಯರಾದ ಡಾ.ಎಸ್.ಆರ್. ಮರಳಿಹಳ್ಳಿ, ಡಾ.ಪಿ.ಎಂ. ಉಪಾಸಿ, ಡಾ.ಎ.ಪಿ. ತಿಪ್ಪೇಸ್ವಾಮಿ, ಹೃದಯ ತಜ್ಞ ಡಾ. ಪಿ. ಮಲ್ಲೇಶ್ ಮಾತನಾಡಿದರು. ಎಸ್.ಎಸ್. ನಾರಾಯಣ ಹೃದಯಾಲಯದ ಅಧ್ಯಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ, ಮಾರ್ಕೇಟಿಂಗ್ ಮ್ಯಾನೇಜರ್ ಜಿ.ಎನ್. ಪ್ರಶಾಂತ್, ವ್ಯವಸ್ಥಾಪಕ ದೇವರಾಜ್ ನಾಯ್ಕ ಮತ್ತಿತರರಿದ್ದರು. ಇದೇ ವೇಳೆ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು.