Relax life: ಒತ್ತಡವೆಂಬ ಬಿರು ಬಿಸಿಲಿಗೆ, ಸಮಚಿತ್ತತೆಯೆಂಬ ತಂಗಾಳಿ

ArogyaVijaya Kannada
3 Min Read

Arogya Vijya | Kannada Health Tips | 31-05-2023

ವಿಶೇಷ ಲೇಖನ: ಡಾ|| ರವಿಕುಮಾರ್ ಟಿ.ಜಿ

Relax life: ಇಂದಿನ ನಾಗಾಲೋಟದ ಪ್ರಪಂಚದಲ್ಲಿ, ನಿತ್ಯ ಜೀವನದ ಒತ್ತಡ ನಿರ್ವಹಿಸುವುದೇ ಬಹುತೇಕರಿಗೆ ಸವಾಲು ಎನಿಸಿದೆ. ಇಂದಿನ ಕಾಲಮಾನದಲ್ಲಿ ಒತ್ತಡವೆಂಬುದು ಸಹಜ ಮತ್ತು ಅನಿವಾರ್ಯ ಎಂಬಂತಾಗಿದೆ. ಕೆಲಸದ ಒತ್ತಡ, ವೈಯುಕ್ತಿಕ ಜವಾಬ್ದಾರಿ, ಸ್ಥಾನಮಾನ, ಭವಿಷ್ಯ, ವರ್ತಮಾನಗಳ ನಿರ್ವಹಣೆಯಂಥ ಅನೇಕ ಸಂಗತಿಗಳು ಒತ್ತಡವನ್ನು ಸೃಷ್ಟಿಸುತ್ತಿವೆ.

ಬಾಹ್ಯ ಅಥವಾ ಆಂತರಿಕವಾದ ಯಾವುದೇ ಕಾರಣವಿದ್ದರೂ ನಮ್ಮ ದೈಹಿಕ ಹಾಗು ಮಾನಸಿಕ ಆರೋಗ್ಯದ ಮೇಲೆ ಆಗಾಧ ಪರಿಣಾಮ ಬೀರುವುದು ಖಚಿತ. ಆಧುನಿಕ ಜೀವನ ಪದ್ಧತಿಯಲ್ಲಿ ಸಹಜವಾಗಿ ಹಬ್ಬಿರುವ ಒತ್ತಡವನ್ನು‌ ನಿಭಾಯಿಸುವ ಜಾಣ್ಮೆಯನ್ನು ನಾವೆಲ್ಲರೂ ಅರಿತಾಗ ಜೀವನ ನಿರ್ವಹಣೆ ಸುಗಮವಾಗಿ ಇರಬಲ್ಲದು.

ಸಂತೃಪ್ತ, ನೆಮ್ಮದಿ, ಆರೋಗ್ಯವಂತ ಬದುಕನ್ನು ನಮ್ಮದಾಗಿಸಿ ಕೊಳ್ಳಲು ಎಲ್ಲರಿಗೂ ಸಾಧ್ಯವಿದೆ. ಅದಕ್ಕೆ ಮುಖ್ಯವಾಗಿ ನಾವೆಲ್ಲರೂ ಪಾಲಿಸಬೇಕಾದ ಅಂಶಗಳೇನು ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

1. ಒತ್ತಡದ ಮೂಲ ಗುರುತಿಸುವಿಕೆ, ಪರಾಮರ್ಶೆ

Relax life: ದಿನ ನಿತ್ಯದ ಒತ್ತಡವನ್ನು ನಿಭಾಹಿಸುವಲ್ಲಿನ ಮೊದಲ ಹೆಜ್ಜೆಯೇ ಒತ್ತಡದ ಗುರುತಿಸುವಿಕೆ. ಒತ್ತಡದ ಮೂಲ ಕಾರಣ ಅರಿತರೆ ಅರ್ಧದಾರಿ ಕ್ರಮಿಸಿದಂತೆ. ಯಾವ ಘಟನೆ, ವ್ಯಕ್ತಿ, ಸನ್ನಿವೇಶದಿಂದಾಗಿ ನಮಗೆ ಒತ್ತಡ ಹೆಚ್ಚು ಎಂಬುದರ ಮೂಲ ಅರಿಯಬೇಕು.
ನಮ್ಮಲ್ಲಿ ಒತ್ತಡವನ್ನು ಪ್ರಚೋದಿಸುವ ಅಂಶಗಳಾವುವು ಎಂದು ತಿಳಿದು ಅದನ್ನು ಅರ್ಥಮಾಡಿಕೊಂಡಾಗ ಒತ್ತಡ ಶಮನದ
ಮಾರ್ಗ ಕಾಣಿಸುತ್ತವೆ.

ಎಂಥದ್ದೇ ವಿಷಮ, ಕೈಮೀರಿದ ಸನ್ನಿವೇಶಗಳಲ್ಲಿಯೂ ಬುದ್ಧಿಯನ್ನು ಕೋಪದ ಕೈಯಲ್ಲಿ ಕೊಡದೆ ಸಂಯಮದಿಂದ ವರ್ತಿಸುವುದು,
ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದು, ಒತ್ತಡವೆಂಬ ಕಳೆ ಬೆಳೆಯದಂತೆ ತಡೆಯಬಹುದು.

Read Also: Mango Fruit benefits: ಬೇಸಿಗೆ ಬಿಸಿಲಿಗೆ ಮಾವಿನ ಜ್ಯೂಸ್ ಬೆಸ್ಟ್: ಮಾವಿನ ಹಣ್ಣಿನಿಂದ ಆಗುವ ಆರೋಗ್ಯದ ಉಪಯೋಗಗಳು ಇವು !

2. ಕಾಳಜಿಗೆ ಆದ್ಯತೆ, ಇರಲಿ ಪ್ರಶಾಂತತೆ

ದೈಹಿಕ, ಮಾನಸಿಕ ಹಾಗು ಭಾವನಾತ್ಮಕ ಆರೋಗ್ಯಕ್ಕೆ ಉತ್ತೇಜನ ನೀಡುವುದರ ಮೂಲಕ ನಮ್ಮ ಬಗ್ಗೆ ನಾವು ಸದಾ ಕಾಳಜಿ ವಹಿಸಬೇಕು. ಸಾಕಷ್ಟು ನಿದ್ದೆ, ಸಮತೋಲನವಾದ ಆಹಾರ, ನಿಯಮಿತ ವ್ಯಾಯಾಮ ಹಾಗು ಮನಸ್ಸು ನಿರಾಳವಾಗಲು ಬೇಕಾಗುವ ಧ್ಯಾನ, ಯೋಗ ಹಾಗು ಪ್ರಾಣಯಾಮಗಳಿಂದಾಗಿ ಮನಸ್ಸು ಸದಾ ಪ್ರಪುಲ್ಲವಾಗಿ ಇರಿಸಿಕೊಳ್ಳಲು ಸಾಧ್ಯ.

3. ಸಮಯ ನಿರ್ವಹಣೆ ಮತ್ತು ಶಿಸ್ತು

ನಮ್ಮ ದೈನಂದಿನ ಜೀವನದ ಆದ್ಯತೆಗಳನ್ನು ಸರಿಯಾಗಿ ಗುರುತಿಸಿ, ಅದರ ಅನುಸಾರ ಮಹತ್ವ ಕೊಟ್ಟಾಗ ಒತ್ತಡವು (Relax life) ಸಹಜವಾಗಿ ಕುಗ್ಗುತ್ತದೆ. ಮುಖ್ಯ, ಅವಶ್ಯಕ ಕಾರ್ಯಗಳಿಗಷ್ಟೇ ಸಮಯ, ಆದ್ಯತೆ ನೀಡುವುದು ಸಾಧಕರ ಲಕ್ಷಣವೂ ಹೌದು. ವಾಸ್ತವವಾದ ಗುರಿಯ ಜತಗೆ, ಎಲ್ಲವನ್ನು ನಾನೇ ಮಾಡುತ್ತೇನೆಂಬ ಮನೋಭಾವ ತೊರೆದು ಇತರರಿಗೂ ಜವಾಬ್ದಾರಿ ಹಂಚಿ, ಅವರನ್ನು ವಿಶ್ವಾಸದಿಂದ ನಡೆಸಿಕೊಂಡಾಗಲೇ ನಮ್ಮ ಬದುಕಿಗೆ ನಾವು ನಾಯಕರಾಗಲು ಸಾಧ್ಯ.

Relax life kannada

4. ಆರೋಗ್ಯಕರ ಹವ್ಯಾಸಗಳು

ಒತ್ತಡ ಕಡಿಮೆ ಮಾಡಿಕೊಳ್ಳಲು ಆಲ್ಕೊಹಾಲ್‌, ಧೂಮಪಾನಕ್ಕೆ ಅನೇಕರು ದಾಸರಾಗಿವುದು‌ ನಿಜಕ್ಕೂ ಖೇದದ ಸಂಗತಿ. ಹಾಗೆಯೇ ಹೆಚ್ಚು ಜಂಕ್ ಆಹಾರ ಸೇವನೆ, ದುಶ್ಚಟಗಳಿಂದ ದೂರ ಇರುವುದು ಒತ್ತಡ ನಿರ್ವಹಣೆಯಲ್ಲಿ ಖಂಡಿತ ಪಾತ್ರ ವಹಿಸುತ್ತದೆ. ತಕ್ಷಣದ ನಿರ್ಧಾರ, ಮಾತಿಗೆ ಬೀಳದೇ ಸಾವಧಾನದಿಂದ, ಶಾಂತಿಯಿಂದ ಇರುವುದನ್ನು, ವರ್ತಿಸುವುದನ್ನು ನಾವೆಲ್ಲರೂ ಅಭ್ಯಾಸ ಮಾಡಿಕೊಳ್ಳಬೇಕು.

ಕುಟುಂಬದವರೊಂದಿಗೆ, ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಸ್ನೇಹಿತರು ಬಂಧುಗಳಿಂದ ಅವಶ್ಯವಿದ್ದಾಗ ಸಲಹೆ, ಸೂಚನೆ, ಮಾನಸಿಕ ಬೆಂಬಲ ಪಡೆಯುವುದು ಎಂದಿಗೂ ತಪ್ಪಲ್ಲ. ನಮ್ಮ ಆಪ್ತರೊಂದಿಗೆ ನೋವು, ನಲಿವಿನ ಭಾವನೆ, ಅನುಭವಗಳನ್ನು ಹಂಚಿಕೊಂಡಾಗ ಒತ್ತಡವನ್ನು ನಾವು ಶಮನ ಮಾಡಲು ಸಾಧ್ಯ.

5. ಧನಾತ್ಮಕ ಚಿಂತನ-ಮಂಥನ

Relax life: ಇತರರು ನಮ್ಮೊಂದಿಗೆ ತಮ್ಮ ನೋವು ನಲಿವುಗಳನ್ನು ಹಂಚಿಕೊಂಡಾಗ ಸಂಪೂರ್ಣವಾಗಿ ಅವರಿಗೆ ಕಿವಿಯಾಗುವುದು,
ಮಾನಸಿಕ ಸ್ಥೈರ್ಯ ನೀಡುವುದು, ಇತರರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವುದು, ಬೇರೆಯವರ ಯಶಸ್ಸಿಗೆ ಖುಷಿಪಡುವ ಮನಸ್ಥಿತಿಯು ನಮ್ಮ ಮನಸನ್ನು ಸದಾ ಹಸಿರಾಗಿ ಇಡಬಲ್ಲದು.

ನಾವು ಜೀವನದಲ್ಲಿ ಯಶಸ್ಸು ಕಂಡಾಗ ಅದಕ್ಕೆ ಕಾರಣರಾದವರಿಗೆ ಎಲ್ಲರಲ್ಲೂ ಕೃತಜ್ಞತಾಭಾವ ಹೊಂದಿರುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ನಮ್ಮ ಸುತ್ತಲೂ ಉತ್ತಮ ಚಿಂತನೆಗಳ ವ್ಯಕ್ತಿಗಳು ಹಾಗು ಪರಿಸರ ಸೃಷ್ಠಿ ಮಾಡಿಕೊಂಡಾಗ ಒತ್ತಡವು ತಾನಾಗಿಯೇ ಕಾಣೆಯಾಗುತ್ತದೆ.

6. ಸಮತೋಲನವಾದ ಬದುಕು

ಆರೋಗ್ಯಕರವಾದ ಜೀವನ ಶೈಲಿಯು ದೀರ್ಘಕಾಲಿಕ ಒತ್ತಡ ತಡೆಯುವಲ್ಲಿ ಯಶಸ್ವಿಯಾಗ ಬಲ್ಲದು. ವೈಯಕ್ತಿಕ ಹಾಗು ವೃತ್ತಿ ಜೀವನ ಒಂದಕ್ಕೊಂದು ಪೂರಕವಾಗಿ ನಿರ್ವಹಣೆ‌ ಮಾಡುವುದನ್ನು ನಾವೆಲ್ಲರೂ‌ ಅರಿಯಬೇಕಿದೆ. ದೇಹ ಹಾಗು ಮನಸ್ಸಿಗೆ ವಿಶ್ರಾಂತಿ ಸಿಗುವಂತಹ ಹಾಗು ಆಧ್ಯಾತ್ಮಿಕ ಚಟುವಟಿಕೆಗಳು ಒತ್ತಡ ರಹಿತ, ಸದೃಢ ಜೀವನಕ್ಕೆ ಯಶಸ್ಸು ತುಂಬಿದ ಜೀವನಕ್ಕೆ ಜೀವಸೆಲೆ ಆಗಬಲ್ಲವು.

ನಮ್ಮೆಲ್ಲ ಪ್ರಯತ್ನಗಳು, ಹೋರಾಟಗಳು ಜೀವನಕ್ಕಾಗಿಯೇ ಇರುವಾಗ, ಜೀವನವನ್ನು ಒತ್ತಡದ ಹಿಡಿತಕ್ಕೆ ನೀಡದಂತೆ ನಾವೆಲ್ಲರೂ ಮಾನಸಿಕವಾಗಿ ಸದೃಢರಾಗೋಣ ಎಂಬುದು ನನ್ನ ಅರಿಕೆ.

ಪ್ರೀತಿಯಿಂದ

ಡಾ|| ರವಿಕುಮಾರ್ ಟಿ.ಜಿ
ಮ್ಯಾನೇಜಿಂಗ್ ಡೈರೆಕ್ಟರ್
ಆರೈಕೆ ಆಸ್ಪತ್ರೆ, ದಾವಣಗೆರೆ

Share this Article
Leave a comment

Leave a Reply

Your email address will not be published. Required fields are marked *